Monday, October 15, 2012

ಕಲಘಟಗಿಗೆ ಸುಸುಕ ಬಂದಿದ್ದಿ ಏನ್ ತಮ್ಮಾ?

ತಲೆಬರಹ ನೋಡಿ ತಮಾಷೆ ಅನಿಸಿದ್ರೂ, ನಿಜವಾಗಿ ನಡೆದ ಘಟನೆ. ನಮ್ಮಮ (ಸರಕಾರಿ ಆಸ್ಪತ್ರೆಯಲ್ಲಿ ನರ್ಸ ಆಗಿದ್ರು) ವರ್ಗಾವಣೆ ತಗೊಂಡು ಕಲಘಟಗಿ ಅನ್ನೋ ಪಟ್ಟಣಕ್ಕೆ ಬಂದ್ರು. ಈ ಬದಲಾವಣೆಯಿಂದ ನಾನು ಕೂಡ ಕಾಲೇಜಿಗೆ ಧಾರವಾಡವನ್ನು ಅವಲಂಬಿಸುವ ಹಾಗಾಯ್ತು. ಅಂತು ಇಂತೂ ಸತ್ತು ಕೆಟ್ಟು ಕರ್ನಾಟಕ ಎಜುಕೇಶನ್ ಬೋರ್ಡ್ನ ಪದವಿ ಪೂರ್ವ ವಿಭಾಗದಲ್ಲಿ ಕಾಮರ್ಸ ಸೇರಿಕೊಂಡೆ. ಸೇರಿಕೊಂಡ ಹೊಸತರಲ್ಲಿ ಕಲಘಟಗಿಯಲ್ಲಿ ನಮ್ಮ ಮನೆ ಇರದ ಕಾರಣ ಧಾರವಾಡದ ನಮ್ಮ ನೆಂಟರ ಮನೆ ಆಶ್ರಯ ತಾಣವಾಗಿತ್ತು. ಅಲ್ಲಿಂದ ನಮ್ಮಮ್ಮ ಹೋಗಿ ಬಂದು ಮಾಡುತ್ತಿದ್ದರು. ಒಂದು ದಿನ ಅವರು ಬೇಗ ಮನೆ ತಲುಪಿದ್ದರು, ನಾನು ಕಾಲೇಜು ಮುಗಿಸಿ ಬಂದೆ. ಊಟ ಮಾಡಿ ಕುಳಿತಾಗ ಅಮ್ಮ ಥಟ್ಟಂತ ಪಚ್ಚಿ ನಿನ್ ಬಸ್ ಪಾಸ್ ಸಿಕ್ಕ್ತೇನೋ ಅಂದ್ರು. ನಾನು ಬಂದಿದೆ ಅಂದೆ. ಅದಕ್ಕೆ ಅವರು ನನ್ನದೊಂದು ಚಿಕ್ಕ ಕೆಲಸ ಇದೆ ಮಾಡ್ತಿಯ ಅಂದ್ರು. ನಾನು ಏನಪ್ಪಾ ಇರಬಹುದು ಅಂತ ಯೋಚನೆ ಮಾಡ್ತಾ ಇದ್ದೆ. ಅವರು ಅದಕ್ಕೆ ಏನಿಲ್ಲ ರಕ್ತದ ಮಾದರಿ ತೊಗೊಂಡಿರೋ ಗ್ಲಾಸ್ ಇವೆ ಅದನ್ನ ಕಲಘಟಗಿಗೆ ಹೋಗಿ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕೊಟ್ಟು ಬಾ, ನಾನು ಮರೆತು ಬಂದೆ ಅಂದ್ರು.

ಆಗ ಸರಿಯಾಗಿ ಸಮಯ ಮೂರು ಘಂಟೆ, ಕಲಘಟಗಿಗೆ ಧಾರವಾಡ ದಿಂದ ಎರಡು ದಾರಿಗಳಿವೆ ಒಂದು ಮೇನ್ ರೋಡು ಮತ್ತೊಂದು ಹಳ್ಳಿಗಳ ಮೂಲಕ ವಯಾ ರೋಡು. ಬಸ್ ಸ್ಟ್ಯಾಂಡ್ಗೆ ಬಂದು ನೋಡಿದ್ರೆ ಜನರ ಸಂತೆ ಅಲ್ಲಿ. ಅದರಲ್ಲೂ ತಂಬಾಕು ಎಲೆ ಅಡಿಕೆ ವಾಸನೆ ಘಂ ಅನ್ನೋ ಕೆಲವರಾದರೆ, ಸ್ವಲ್ಪ ಟೈಟಾಗಿ, ತಂಬಾಕು ಹಾಕ್ಕೊಂಡು ಗಬ್ಬು ನಾರ್ತಿರೋ ಇನ್ನು ಕೆಲವರು. ಪಾಪ ಅವರು ಅನಕ್ಷರಸ್ತರು , ಹಳ್ಳಿ ಜನ ಅವರಿಗೆ ಸ್ವಚ್ಚತೆ ಅನ್ನೋ ಪದನೆ ಗೊತ್ತಿಲ್ಲ, ಕಾಡು ನುಗ್ಗಿ ಸೌದೆ ಜೊತೆ ಸಿಗೋ ಪದಾರ್ಥ ತಂದು ಅಥವಾ ಕೂಲಿ ಮಾಡ್ಕೊಂಡು ಜೀವನ ಮಾಡೋರು. ಇನ್ನ ಅವರಿಂದ ಏನು ನಿರೀಕ್ಷೆ ಮಾಡೋಕ್ಕಾಗುತ್ತೆ. ಒಂದು ಮಾತ್ರ ನಿಜ ಎಷ್ಟು ಒಳ್ಳೆಯವರೋ ಅಷ್ಟೇ ನಿಷ್ಟುರರು. ಹೆಚ್ಚು ಕಮ್ಮಿ ಮಾತಾಡಿದರೆ ಬಿತ್ತು ನಾಲ್ಕು ಅಂತ ಗ್ಯಾರಂಟಿ. ಅವರ ಬಗ್ಗೆ ಯೋಚನೆ ಮಾಡುತ್ತಾ ನಿಂತಾಗಲೇ, ಬಸ್ಸೊಂದು ಪ್ಲಾಟಫಾರ್ಮ್ ಹತ್ರ ಬಂತು. ಬೋರ್ಡು - ಧಾರವಾಢ - ಜೋಡಳ್ಳಿ- ಮುತ್ತಗಿ - ಕಲಘಟಗಿ. ಬಸ್ಸು ಹತ್ತಿದರೆ, ಕರಿಯ ಬಣ್ಣದ ಸಿಟುಗಳೆಲ್ಲ ಬಿಳಿಯದಾಗಿವೆ, ಕಾರಣ ಸುಣ್ಣ ತಂಬಾಕು ತಿನ್ನುವವರ ಕೃಪೆ. ಹಾಗೂ ಹೀಗೂ ನುಗ್ಗಿ ಡ್ರೈವರ್ ಪಕ್ಕದ ಅಡ್ಡ ಸಿಟಿನಲ್ಲಿ ಗ್ಲಾಸಿಗೆ ವೋರಗಿಕೊಂಡು ರೋಡ ಚಾಲಕನಿಗೆ ಕಾಣುವಂತೆಯೇ ನನಗೂ ಕಾಣಿಸಬೇಕೆಂದು ಕುಳಿತೆ, ಕಂಡಕ್ಟರ ಬಂದು ಟಿಕೆಟ್ ಅಂತ ಕೇಳಿದ. ನಾನು ಪಾಸ್ ತೋರಿಸಿದೆ, ಅವನು ಮರು ಮಾತಿಲ್ಲದೆ ಹೊರತು ಹೋದ. ಬಸ್ಸು ಎಲ್ಲಾ ಊರು ಸುತ್ತಿಕೊಂಡು ಕಲಘಟಗಿ ಪಟ್ಟಣ ತಲುಪಿತು. ನಾನು ಇಳಿದು ಕೊಳ್ಳೋದು  ಸರಕಾರಿ ಆಸ್ಪತ್ರೆಯಾಗಿದ್ದರಿಂದ ಅದು ಊರ ಹೊರಗೆ ಇತ್ತು, ನಾನು ಅಲ್ಲೇ ಇಳಿದುಕೊಂಡೆ.

ಮೊದಲ ಭೇಟಿಯಾಗಿದ್ದರಿಂದ ನಾನು ಕೇಳಿಕೊಂಡೆ ಆಸ್ಪತ್ರೆಯತ್ತ ಹೊರಟು ಪ್ರಯೋಗಾಲಯದ ಸಿಬ್ಬಂದಿಯನ್ನು ಕಂಡು ತಲುಪಿಸಬೇಕಾದ ಕೆಲಸ ಮಾಡಿ ಮುಗಿಸಿ ಹತ್ತು ನಿಮಿಷದೊಳಗೆ ವಾಪಸಾದೆ. ವಾಪಸ್ಸಾಗಿ ಅಲ್ಲಿಂದ ಬಸ್ ನಿಲ್ದಾಣ ತಲುಪಲು ಪಕ್ಕದ ಚಹಾ ಅಂಗಡಿಯ ಹೆಣ್ಣು ಮಗಳನ್ನು ಕೇಳಿದೆ. ಅವಳಿಗೆ ನಾನು ಧಾರವಾಡ ಎಂದಾಗ ಅವಳು ಇಲ್ಲೇ ನಿಲ್ಲು ಬಸ್ಸು ಬರುತ್ತೆ ಎಂದಳು. ನಾನು ಅರ್ಧ ಘಂಟೆ ಕಾದ ನಂತರ ಬಸ್ಸೊಂದು ಧೂಳೆಬ್ಬಿಸುತ್ತ ಬಂದು ನಿಂತಿತು. ನಾನು ಹತ್ತಿ ಮತ್ತೆ ನನ್ನ ಜಾಗಕ್ಕೆ ಹೋಗಿ ಮುಂದೆ ಕುಳಿತುಕೊಂಡೆ. ಬಸ್ಸು ಪ್ರಯಾಣ ಬೆಳೆಸಿ ಗುಡ್ ವಿಲ್ ಕಾಲೇಜ್ ಹತ್ತಿರ ಬಂತು. ಇದೊಂದು ಕ್ರಿಸ್ತಿಯನ್ ಸಂಸ್ಥೆಯಾಗಿದ್ದು ಅಲ್ಲಿ ಸುತ್ತ ಮುತ್ತಲಿನ ಹಳ್ಳಿ ಮತ್ತು ಲಮಾಣಿ ತಾಂಡಗಳ ವಿಧ್ಯಾರ್ಥಿಗಳ ಹೈಸ್ಚೂಲ್ ನಿಂದ ಪದವಿ ಶಿಕ್ಷಣವರೆಗೂ ಏಕೈಕ ಆಸರೆಯಾಗಿತ್ತು. ಸಂಜೆಯಾಗಿದ್ದರಿಂದ ಎಲ್ಲಾ ಶಾಲಾ ಮಕ್ಕಳು ಮತ್ತು ಕಾಲೇಜು ವಿಧ್ಯಾರ್ಥಿಗಳು ಬಸ್ಸಿನಲ್ಲಿ ಕುರಿಗಳಂತೆ ತುಂಬಿಕೊಂಡರು. ಕಂಡಕ್ಟರ ಸಾಹೇಬ್ರು ಕೊನೆಯಿಂದ ಗೊನೆಯವರೆಗೂ ಎಲ್ಲರಗೂ ಟಿಕೆಟ್ ಕೇಳುತ್ತ ಬಂದರು. ಬಸ್ಸಿನಲ್ಲಿ ವಿಧ್ಯಾರ್ಥಿಗಳೇ ತುಂಬಿಕೊಂಡಿದ್ದರಿಂದ ಬರಿ ಪಾಸ್ - ಪಾಸ್ ಎಂದು ಕೇಳಿಸುತ್ತಿತ್ತು. ನನ್ನ ಪಾಳಿ ಬಂದಾಗ ನಾನು ಪಾಸ್ ಎಂದು ಕಂಡಕ್ಟರ್ ಮುಖ ನೋಡಿದೆ. ಅವನು ನನ್ನ ಮುಖ ನೋಡಿ ನೀನು ಅವಾಗ್ಲೇ ನಮ್ ಬಸ್ಸಲ್ಲೇ ಬಂದಿಲ್ಲ ತಮ್ಮ? ಎಂದ, ನಾನು ಹೌದು ಎಂದು ತಲೆ ಅಲ್ಲಾಡಿಸಿದೆ.  ಅವನು ಎಲ್ಲರಿಗೂ ಕೇಳಿಸುವಂತೆ ಜೋರಾಗಿ ಅವನ ಕಿರುಬೆರಳು ತೋರಿಸುತ್ತ , ತಮ್ಮ ಕಲಘಟಗಿಗೆ ಧಾರವಾಡದಿಂದ ಏನು ಸುಸು ಮಾಡಕ ಬಂದಿದ್ದೇನು? ಎಂದ. ನನ್ನ ಮುಖ ನಾಚಿ ನಿರಾಗಿದ್ದರೆ ಮಿಕ್ಕವರೆಲ್ಲ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದರು.

ಅದಕ್ಕೆ ಹೇಳೋದು ಕಂಡಕ್ಟರ್ ಹತ್ರ ಮಾತಾಡೋವಾಗ ಹುಷಾರಾಗಿರಬೇಕು ಅಂತ. ತಿಳಿತೆನ್ರಿ?